top of page

ಬೇಡ್ತಿ ಹೊಸ ಸೇತುವೆಯ ಸಮೀಪ ಕೂಡುರಸ್ತೆ ಅಂಚಿನಲ್ಲಿ ಬಿರುಕು ; ಆತಂಕದಲ್ಲಿ ವಾಹನ ಸವಾರರು


ree

ಯಲ್ಲಾಪುರ

ತಾಲೂಕಿನ ಮೂಲಕ ಹಾದು ಹೋದ ರಾಜ್ಯ ಹೆದ್ದಾರಿ 93ರಲ್ಲಿ ಬೇಡ್ತಿ ನದಿಗೆ ಹೊಸದಾಗಿ ನಿರ್ಮಿಸಲಾದ ಸೇತುವೆಗೆ ಹೊಂದಿಕೊಂಡಂತೆ ಇರುವ ಹೊಸದಾಗಿ ನಿರ್ಮಿಸಲಾದ ಕೂಡುರಸ್ತೆಯು ಸುರಿಯುತ್ತಿರುವ ಮಳೆಗೆ ಬಿರುಕು ಬಿಟ್ಟಿದೆ.


ree

ಈ ಬಿರುಕು ಭಾರಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸೇತುವೆಯ ಸಮೀಪ ರಸ್ತೆಯಲ್ಲಿ ಭಾರಿ ಬಿರುಕು ಬಿಟ್ಟಿರುವುದರಿಂದ ಪ್ರಯಾಣಿಕರಿಗೆ ತೀವ್ರ ಆತಂಕ ಎದುರಾಗಿದೆ. ಈ ಕೂಡುರಸ್ತೆಯನ್ನು ನಿರ್ಮಾಣ ಮಾಡಿ ಹೊಸ ಸೇತುವೆಯನ್ನು ಕಳೆದ ಫೆಬ್ರುವರಿ ತಿಂಗಳಿನಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಈಗ 20 ಅಡಿಗೂ ಉದ್ದಕ್ಕೆ ಬಿರುಕು ಕಾಣಿಸಿಕೊಂಡಿದೆ. ಈಗಷ್ಟೇ ಮಳೆಗಾಲ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಜೋರಾಗಿ ಮಳೆ ಸುರಿದರೆ ಈ ಬಿರುಕಿನಲ್ಲಿ ಮಳೆ ನೀರು ಇಂಗಿ, ಬಿರುಕು ಇನ್ನಷ್ಟು ದೊಡ್ಡದಾಗಿ ಸೇತುವೆಯ ಸಮೀಪದ ಕೂಡು ರಸ್ತೆಯ ಅಂಚು ಕುಸಿದು ಬೀಳುವ ಅಪಾಯವಿದೆ. ಭಾರಿ ತೂಕದ ವಾಹನಗಳು, ದೊಡ್ಡ ವಾಹನಗಳು, ಬಿರುಕು ಬಿಟ್ಟಿರುವುದು ಅರಿವಿಗೆ ಬಾರದೇ ಹೆದ್ದಾರಿ ಅಂಚಿಗೆ ಸಂಚರಿಸಿದರೆ ಹೆದ್ದಾರಿ ಕುಸಿಯುವ ಅಪಾಯ ಎದುರಾಗಿದೆ.


ree

ಮಣ್ಣು ಬರಾವು ಮಾಡಿ ಕೂಡುರಸ್ತೆ ನಿರ್ಮಾಣ;

ಹೊಸ ಸೇತುವೆಯ ಲೋಕಾರ್ಪಣೆಗೂ ಮುನ್ನ ಫೆಬ್ರುವರಿ ತಿಂಗಳಿನಲ್ಲಿ ಹಳೆಯ ಸೇತುವೆಗೆ ಹೋಗುವ ರಸ್ತೆಯಿಂದ ಹೊಸ ಸೇತುವೆಯನ್ನು ಸಂಪರ್ಕಿಸುವ ಹೊಸ ಕೂಡು ರಸ್ತೆಯನ್ನು ಬೇರೆಡೆಯಿಂದ ತಂದ ಮಣ್ಣನ್ನು ಬರಾವು ಮಾಡಿ ನಿರ್ಮಿಸಲಾಗಿತ್ತು. ರಸ್ತೆ ನಿರ್ಮಿಸುವುದಕ್ಕೂ ಮೊದಲು ಈ ಸ್ಥಳದಲ್ಲಿ ಅನಾದಿ ಕಾಲದಿಂದಲೂ ಈಶ್ವರ ಲಿಂಗವೊಂದು ಇತ್ತು. ಕೂಡುರಸ್ತೆಯ ನಿರ್ಮಾಣಕ್ಕೆಂದು ಈ ಲಿಂಗವನ್ನು ಸಮೀಪದಲ್ಲಿಯೇ ಬೇರೆಡೆ ಸ್ಥಳಾಂತರಿಸಲಾಗಿತ್ತು. ಮಣ್ಣು ತಂದು ಬರಾವು ಮಾಡಿ, ಕಂದಕವನ್ನು ಮುಚ್ಚಿ, ಹೊಸ ಸೇತುವೆಯ ಸಮಮಟ್ಟಕ್ಕೆ ಕೂಡು ರಸ್ತೆ ನಿರ್ಮಿಸಲಾಗಿತ್ತು. ಈಗ ಮಳೆಯಿಂದಾಗಿ ನೀರು ಮಣ್ಣಿನೊಳಗೆ ಇಂಗಿ ರಾಜ್ಯ ಹೆದ್ದಾರಿಯಲ್ಲಿ ಅಂಚಿನ ತಡೆ ಕಂಬಿಗಳ ಪಕ್ಕ ಬಿರುಕು ಬಿಟ್ಟಿದೆ.

ನದಿ ನೀರು ಮೇಲೇರಿದರೆ ಅಪಾಯ ಖಂಡಿತ;

ಪ್ರಸ್ತುತ ಬೇಡ್ತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಮಳೆ ಜೋರಾಗಿ ನದಿಯ ನೀರಿನ ಮಟ್ಟ ಏರಿಕೆಯಾದರೆ ಕೂಡುರಸ್ತೆ ನಿರ್ಮಾಣಕ್ಕೆ ಬರಾವು ಮಾಡಿದ ಮಣ್ಣು ಕೊಚ್ಚಿಕೊಂಡು ಹೋದರೆ ಅಥವಾ ಕುಸಿದರೆ ದೊಡ್ಡ ಮಟ್ಟದಲ್ಲಿ ಅಪಾಯ ಎದುರಾಗಲಿದೆ. ಕಳೆದ ಎರಡು ವರ್ಷಗಳ ಹಿಂದೆ ಸುರಿದ ರಣಭೀಕರ ಮಳೆಗೆ ಬೇಡ್ತಿ ಹಳೆ ಸೇತುವೆಯ ರೇಲ್ಸ್ ಕೊಚ್ಚಿಹೋಗಿ, ಸೇತುವೆಗೆ ದೊಡ್ಡ ಮಟ್ಟದಲ್ಲಿ ಜಕಂ ಆಗಿತ್ತು. ಈ ಕಹಿ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಮಾಸದಿರುವಾಗಲೇ ಸೇತುವೆಗೆ ಹೊಂದಿಕೊಂಡಿರುವ ಕೂಡುರಸ್ತೆ ಬಿರುಕು ಬಿಟ್ಟಿರುವುದು ಜನರ ನಿದ್ದೆಗೆಡಿಸಿದೆ.

ಮೈಮರೆತರೆ ಅಪಾಯ;

ಬೇಡ್ತಿ ಸೇತುವೆಯ ಸಮೀಪ ಹೆದ್ದಾರಿ ಬಿರುಕು ಬಿಟ್ಟಿರುವುದು ದೂರದಿಂದ ವಾಹನ ಸವಾರರ ಗಮನಕ್ಕೆ ಬರುವುದಿಲ್ಲ. ಎದುರಿನಿಂದ ವಾಹನ ಬಂದಾಗ ಅಥವಾ ಮೈಮರೆತು ಹೆದ್ದಾರಿ ಅಂಚಿಗೆ ಸಂಚರಿಸುವಾಗ ಅಪಾಯವಾಗಬಹುದಾದ ಸಾಧ್ಯತೆ ಇದೆ. ಸಂಬಂದ ಪಟ್ಟವರು ಕೂಡಲೇ ಎಚ್ಚೆತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕು ಎಂದು ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

------------------------------------------------------------------------------------------------


-------------------------------------------------------------------------------------------------




 
 
 

Comments


bottom of page